Adhyathma – Kshetra Yatre

ಕ್ಷೇತ್ರದರ್ಶನ

ಮೈಸೂರಿನ ಪರಮಪೂಜ್ಯ ಶ್ರೀ ಅರ್ಜುನಗುರುಗಳು ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡೇ ಬರುತ್ತಿದ್ದಾರೆ. ಇದರಲ್ಲಿ ಕ್ಷೇತ್ರದರ್ಶನವೂ ಕೂಡ ಮಹತ್ತರವಾದುದು. ಭಕ್ತರ ಕರ್ಮಕಳೆಯುವ ಸದುದ್ದೇಶಗಳಿಂದ ಗುರುಗಳು ಆಗಾಗ್ಗೆ ಧಾರ್ಮಿಕ ಮಹತ್ತ್ವಗಳಿರುವ ಕ್ಷೇತ್ರಗಳಿಗೆ ಭಕ್ತರೊಡನೆ ಹೋಗುತ್ತಿರುತ್ತಾರೆ. ಭಕ್ತರಿಗೆ ಆ ಧಾರ್ಮಿಕ ಕ್ಷೇತ್ರಗಳ ಪವಿತ್ರಸ್ಪಂದನಗಳೊಡನೆ ಗುರುಸಾನ್ನಿಧ್ಯದ ಪುಣ್ಯಫಲವು ಅಲೌಕಿಕ ಆನಂದವನ್ನುಂಟುಮಾಡುತ್ತದೆ.

ಜನವರಿ ಮೊದಲ ದಿನದ ದೇವಾಲಯ ದರ್ಶನ

ಕ್ಯಾಲೆಂಡರ್ ಬದಲಿಸುವ ಜನವರಿ ಮಾಸದ ಹೊಸವರ್ಷಾಚರಣೆಯ ಬದಲಾಗಿ ಧಾರ್ಮಿಕ ಪುಣ್ಯಸ್ಥಳಗಳ ದರ್ಶನ ಮಾಡಿಸುವುದೇ ಕ್ಷೇತ್ರಯಾತ್ರೆಯ ಪ್ರಥಮ ಕುಸುಮವಾಯಿತು. ದಿನಾಂಕ: 01/01/2021 ರಂದು ಗುಂಡ್ಲುಪೇಟೆಯ ಸುತ್ತಮುತ್ತ ದೇವಾಲಯಗಳಿಗೆ ಭೇಟಿಯಿತ್ತು ಆ ದಿನಪೂರ್ತಿ ಭಕ್ತರು ಧಾರ್ಮಿಕಪ್ರಭೆಯ ಸಿಂಚನದಿಂದಿರುವಂತಾಯಿತು.

ಗಾಣಗಾಪುರ ಕ್ಷೇತ್ರ

ದಿನಾಂಕ: 25/09/2021 ರಿಂದ ದಿನಾಂಕ:30/09/2021/ ರವರಿಗೆ ಗಾಣಗಾಪುರ, ಮಾಣಿಕ್ ಪ್ರಭು ಸನ್ನಿಧಿ, ಚಂದಲಾಪುರ ಕ್ಷೇತ್ರದರ್ಶನ ನಂತರದ ಕುಸುಮವಾಯಿತು. ಸಂಗಮದಲ್ಲಿ ಔದುಂಬರ, ನೃಸಿಂಹಸರಸ್ವತಿ ಸ್ವಾಮಿಗಳ ದೇವಸ್ಥಾನದ ಸೇವೆಯಿಂದ ಭಕ್ತರ ಮನವು ಪರಮಪವಿತ್ರವಾಯಿತು. ಹುಮ್ನಾಬಾದ್ ನ ಮಾಣಿಕ್ ಪ್ರಭು ಸಾನ್ನಿಧ್ಯಕ್ಕೆ ಆತ್ಮಬಂಧುಗಳೆಲ್ಲರೂ ಶೋಭಾಯಾತ್ರೆಯನ್ನು ನೆನಪಿಸುವ ಹಾಗೆ ಭಕ್ತಿ ಶ್ರದ್ಧೆಯಿಂದ ನಡೆದು ಮಾಣಿಕ ಪ್ರಭುಗಳ ದರ್ಶನ ಪಡೆದರು.
ಚಂದಲಾಪರಮೇಶ್ವರಿಯ ದಿವ್ಯ ವಿಗ್ರಹದ ಪ್ರಭೆಗೆ ತಲೆಬಾಗಿದ ಆತ್ಮಬಂಧುಗಳು ದುರ್ಗಾಸಪ್ತಶತಿಯ ಕೆಲವು ಅಧ್ಯಾಯಗಳನ್ನು ಪಾರಾಯಣ ಮಾಡಿದರು.

ದಕ್ಷಿಣಾಮ್ನಾಯ ಶಾರದಾಪೀಠದರ್ಶನ

ದಿನಾಂಕ: 02/08/2022 ರಂದು ಚಾತುರ್ಮಾಸ್ಯ ಪ್ರಯುಕ್ತ ಶೃಂಗೇರಿಯ ಕ್ಷೇತ್ರಯಾತ್ರೆ ಕೈಗೊಂಡು ಜಗದ್ಗುರುಗಳಿಗೆ ಭಿಕ್ಷಾವಂದನೆ ಸಮರ್ಪಿಸಲಾಯಿತು. ಭಿಕ್ಷೆಗೆ ಸಕಲಪರಿಕರಗಳನ್ನೂ ಹೊಂದಿಸಿಕೊಂಡು ಪರಮಪೂಜ್ಯರೊಡನೆ ಹಾಗೂ ಮಾತೃಶ್ರೀಯವರೊಡನೆ ಶೃಂಗೇರಿಯ ಕ್ಷೇತ್ರಯಾತ್ರೆ ಆರಂಭವಾಯಿತು. ಅಲ್ಲಿ ಗುರುನಿವಾಸದಲ್ಲಿ ಜಗದ್ಗುರುಗಳಿಗೆ ಪರಮಪೂಜ್ಯರು ಆರತಿ ಬೆಳಗಿ ಭಿಕ್ಷಾವಂದನೆಯನ್ನು ಸಮರ್ಪಿಸಿದರು. ನಂತರ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಅಧಿಷ್ಠಾನದಲ್ಲಿ ಪ್ರದಕ್ಷಿಣೆ, ಜಪಾದಿಗಳನ್ನು ಮಾಡಿ ಶಾರದಾಂಬೆಯ ದೇವಸ್ಥಾನದಲ್ಲಿ ಸುವಾಸಿನಿಯರಿಗೆ ಮೊರದ ಬಾಗಿನವನ್ನು ನೀಡಿಸಿದರು.ಭಿಕ್ಷಾವಂದನೆ, ಸೇವೆಯ ಕ್ರಮವನ್ನು ಭಕ್ತರಿಗೆ ತಾವೇ ಸ್ವತಃ ಮಾಡುತ್ತಾ ಮಾರ್ಗಬಂಧುಗಳಾದರು ಪರಮಪೂಜ್ಯರು.

ಶಿರಡಿ ಯಾತ್ರೆ

ದಿನಾಂಕ: 17/06/2022 ರಿಂದ 20/06/2022 ರವರಿಗೆ ಶಿರಡಿ ಕ್ಷೇತ್ರಯಾತ್ರೆ ಸುಮಾರು 200 ಆತ್ಮಬಂಧುಗಳ ಜೊತೆ ಕೈಗೊಳ್ಳಲಾಯಿತು. ಆತ್ಮಬಂಧುಗಳ ಮನದಲ್ಲಿ ದೇವರ ಸ್ಥಾನ ಪಡೆದ ಶ್ರೀ ಅರ್ಜುನ ಗುರುಗಳ ಜೊತೆಗೆ ಸಾಯಿನಾಥನ ದರ್ಶನ ಮಾಡಿದುದೇ ಆತ್ಮಬಂಧುಗಳ ಪುಣ್ಯವಿಶೇಷವಾಗಿತ್ತು. ಶಿರಡಿಯಲ್ಲಿ ಸಾಯಿನಾಥ ಮಹಾರಾಜರ ಆರತಿಯನ್ನು ವೀಕ್ಷಿಸಿದ ಆತ್ಮಬಂಧುಗಳು ಶನಿಸಿಂಗಾಪುರಕ್ಕೆ ತೆರಳಿ ಗುರುಗಳೊಡನೆ ಸೇವೆ ಸಲ್ಲಿಸಿದರು.
ನಂತರದ ಕೆಲ ತಿಂಗಳುಗಳಲ್ಲಿ ಪರಮಪೂಜ್ಯ ಗುರುಗಳು ಹಾಗೂ ಮಾತೃಶ್ರೀ ಅಮ್ಮನವರು ಅನೇಕ ಗುರುಬಂಧುಗಳ ಜೊತೆಗೆ ತಿಂಗಳಿಗೊಮ್ಮೆ ಶಿರಡಿಯಲ್ಲಿ ಸಾಯಿನಾಥರ ದರ್ಶನ ಹಾಗೂ ಸೇವೆಯನ್ನು ಮಾಡಿಸಿದರು. ಅವಧೂತರೊಡನೆ ಸಾಯಿನಾಥರ ದರ್ಶನ ನಿಜಕ್ಕೂ ಹರ್ಷಪ್ರದವಲ್ಲದೇ ಭಾಗ್ಯೋದಯವೆಂದರೆ ತಪ್ಪಾಗಲಾರದು. ಆಯ್ದ ಕೆಲ ಗುರುಬಂಧುಗಳು ಅಲ್ಲಿಗೆ ತೆರಳುವ ಪ್ರತಿಯೊಬ್ಬರಿಗೂ ಮೈಸೂರಿನಿಂದ ಹೊರಡುವಾಗಿಂದ ಆರಂಭಿಸಿ ಕ್ಷೇತ್ರ ದರ್ಶನ ಮುಗಿಸಿ ಮತ್ತೆ ಅವರವರ ಊರುಗಳಿಗೆ ತೆರಳುವವರೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡುತ್ತಿದ್ದರು.

ಹಂಪೆ ಕ್ಷೇತ್ರ ದರ್ಶನ

ದಿನಾಂಕ: 26/09/2021ರಂದು ಕೈಗೊಂಡ ಹಂಪೆಯ ವಿರೂಪಾಕ್ಷ ದೇವಾಲಯ ಕ್ಷೇತ್ರದರ್ಶನ ಮತ್ತೊಂದು ಕುಸುಮವಾಗಿದೆ. ಕರೋನಾದಂತಹ ಸೂಕ್ಷ್ಮ ಸಂದರ್ಭದಲ್ಲಿ ‌ಲೋಕಕಲ್ಯಾಣಕ್ಕಾಗಿ ವಿಶೇಷಪೂಜೆ ಹೋಮಾದಿಗಳನ್ನು ಮಾಡಿದರು. ವಿರೂಪಾಕ್ಷ ಹಾಗೂ ಭುವನೇಶ್ವರಿ ದೇವಿಯ ದರ್ಶನ ಮಾಡಿಸಿ ಸ್ತೋತ್ರಾದಿಗಳ ಸೇವೆಯನ್ನು ಮಾಡಿಸಿದರು. ಅಲ್ಲಿನ ಗುರುಗಳೊಂದಿಗೆ ಸಂವಾದ ನಡೆಸಿದರು.
ಭೀಮಾಶಂಕರದಲ್ಲಿ ಅಲ್ಲಿನ ಮಠಾಧೀಶರೊಡನೆ ಸಂವಾದ ನಡೆಸಿ ಭೀಮಾಶಂಕರರ ದರ್ಶನ ಮಾಡಿಸಿದರು.

ವರದಹಳ್ಳಿ ಪರಮಹಂಸ ಶ್ರೀಧರಾಶ್ರಮ ಕ್ಷೇತ್ರದರ್ಶನ

ಸಾಗರದ ವರದಹಳ್ಳಿಯ ಶ್ರೀಧರಾಶ್ರಮದ ಕ್ಷೇತ್ರದರ್ಶನ ಮತ್ತೊಂದು ಕುಸುಮವಾಗಿದೆ. ಅನೇಕ ಬಾರಿ ಗುರುಗಳು ಶ್ರೀಧರಾಶ್ರಮಕ್ಕೆ ತೆರಳಿ ಭಕ್ತರೊಡನೆ ಸೇವೆ ಸಲ್ಲಿಸುತ್ತಿದ್ದರು. ಒಮ್ಮೆ ಆತ್ಮಬಂಧುಗಳೊಡನೆ ಶ್ರೀಧರಾಶ್ರಮದ ಪರಿಸರವನ್ನು ಸ್ವಚ್ಛಗೊಳಿಸಲು ಗುರುಗಳು ಆದೇಶವಿಟ್ಟರು. ಅದರಂತೆ ಆತ್ಮಬಂಧುಗಳು ದಿನಾಂಕ: 01/01/2022ರಂದು ಶ್ರೀಧರ ಆಶ್ರಮ ವರದಳ್ಳಿಯಲ್ಲಿ ಸ್ವಚ್ಛತಾ ಪರಿಕರಗಳೊಡನೆ ಆಶ್ರಮದ ಸುತ್ತಮುತ್ತ ಸ್ವಚ್ಛಗೊಳಿಸಿದರು. ಸ್ವಚ್ಛ ಪರಿಸರದಲ್ಲಿ ಸ್ವಚ್ಛ ಮನವಿರುವುದು. ಸ್ವಚ್ಛ ಮನದಲ್ಲಿ ಪರಿಶುದ್ಧ ಭಗವಂತನ ಆವಾಸಸ್ಥಾನವಿರುವುದು ಎಂದು ಪ್ರತ್ಯಕ್ಷ ಪ್ರಮಾಣದಿಂದ ತೋರಿಸಿ ನಿರ್ಮಲ ಮನದ ಸೇವಾಭಾವನೆಯ ಅಂಕುರವನ್ನು ಭಕ್ತರ ಮನದಲ್ಲಿ ಬಿತ್ತಿದರು.

ಶ್ರೀಶೈಲ ಕ್ಷೇತ್ರಯಾತ್ರೆ

ಪರಶಿವನ ಅತ್ಯಂತ ಜಾಗೃತಕ್ಷೇತ್ರವಾದ ಶ್ರೀಶೈಲ ಯಾತ್ರೆ ಕ್ಷೇತ್ರದರ್ಶನದ ಮತ್ತೊಂದು ಕುಸುಮವಾಗಿದೆ. ದಿನಾಂಕ: 01/11/2021 ರಂದು ಶ್ರೀಶೈಲದಲ್ಲಿ ಮಲ್ಲಿಕಾರ್ಜುನನ ದರ್ಶನ, ಅಮ್ಮನವರ ಸೇವೆ, ದರ್ಶನ ಭಕ್ತರಲ್ಲಿ ಪುನೀತಭಾವವನ್ನುಂಟುಮಾಡಿತು. ಬಗೆಬಗೆಯ ಹೂಗಳಿಂದ, ಸ್ತೋತ್ರಗಳಿಂದ, ಸ್ತುತಿಗಳಿಂದ ಮಂತ್ರಘೋಷಗಳಿಂದ ಜಗತ್ತಿನ ಮಾತಾಪಿತರಾದ ಪಾರ್ವತೀ ಪರಮೇಶ್ವರರನ್ನು ಪೂಜಿಸಿ ಆರಾಧಿಸಿದರು. ಶ್ರೀಶೈಲಶಿಖರಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಅಂದರೆ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ದರ್ಶನದಿಂದ ಮತ್ತೆ ಜನ್ಮವಾಗುವುದಿಲ್ಲ ಎಂದು. ಈ ಮಹಿಮಾನ್ವಿತವಾದ ಶ್ರೀಶೈಲಶಿಖರವನ್ನು ವೀಕ್ಷಿಸಿ ಪಾತಾಳಗಂಗೆಯ ದರ್ಶನ ಮಾಡಿ, ಗುರುಚರಿತ್ರೆಯಲ್ಲಿ ತಂತುಕನಿಗೆ ಕ್ಷಣಾರ್ಧದಲ್ಲಿ ಶ್ರೀಶೈಲದ ದರ್ಶನ ಮಾಡಿಸಿದ ನರಸಿಂಹಸರಸ್ವತಿಗಳನ್ನು ಸ್ಮರಿಸಿದರು. ಅತ್ಯಂತ ಶುಭಪ್ರದವಾದ ಶ್ರೀಶೈಲದ ಮಲ್ಲಿಕಾರ್ಜುನನನ್ನು ದರ್ಶನ ಮಾಡಿ ಭಕ್ತರು ಧನ್ಯತೆಯ ಅನುಭಾವವನ್ನು ಪಡೆದರು.