About Guruji

ಅವಧೂತ

ಅವಧೂತ ಎನ್ನುವ ಪದ ಅಧ್ಯಾತ್ಮ ಪ್ರಪಂಚದ ರೋಮಾಂಚನ, ತರ್ಕವಿತರ್ಕಊಹೆಗಳಿಂದ ಅತೀತ, ಇವರಿಗಿಲ್ಲ ಜಾತಿಮತದ ಚೌಕಟ್ಟು, ಜಾತಕ ನೋಡದೆ ಜನ್ಮಜಾಲಾಡುವ ವಿಶಿಷ್ಟಶಕ್ತಿ.

ದತ್ತಾತ್ರೇಯರಿಂದ ಆರಂಭವಾದ ಅವಧೂತಪರಂಪರೆಯಲ್ಲಿ ಶ್ರೀಪಾದ ಶ್ರೀವಲ್ಲಭ, ನೃಸಿಂಹಸರಸ್ವತಿ, ಸ್ವಾಮಿ ಸಮರ್ಥರು, ಸಾಯಿಬಾಬಾರಂತಹ ಅನೇಕ ಅವಧೂತರು ಭಕ್ತರಿಗೆ ಸನ್ಮಾರ್ಗಪ್ರಕಾಶಕರಾಗಿದ್ದಾರೆ. ಅವಧೂತಪರಂಪರೆಯ ಮಹನೀಯರ ಹೆಸರಾಗಲೀ ಶರೀರವಾಗಲೀ ಅವತಾರವೆತ್ತ ಸ್ಥಳಗಳಾಗಲೀ ಬೇರೆಬೇರೆಯದಾದರೂ ಅವಧೂತಾತ್ಮವು ಒಂದೇ.

ಇವರು ಪೂರ್ವಜನ್ಮದ ಸ್ಮರಣೆಯಿಂದಲೂ ಹಾಗೂ ಸಾಧನೆಯ ಬಲದಿಂದಲೂ ಭಕ್ತಜನರ ಆಧಿವ್ಯಾಧಿಗಳನ್ನು ನಿವಾರಣೆ ಮಾಡಲು ತೊಡಗುತ್ತಾರೆ. ಹೀಗೆ ಶ್ರೀಧರಸ್ವಾಮಿಗಳು, ಜೇನುಗವಿ ನಂಜುಂಡಪ್ಪ, ಸಖರಾಯಪಟ್ಟಣದ ಶ್ರೀ ವೇಂಕಟಾಚಲರಂತಹ ಅವಧೂತರು ಅವತಾರವೆತ್ತ ಈ ನಾಡಲ್ಲಿ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಭಕ್ತಜನರ ಹಿತರಕ್ಷಣೆಯಲ್ಲಿ ಸದಾ ತತ್ಪರರಾಗಿದ್ದಾರೆ.

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಮೈಸೂರಿನ ಶ್ರೀ ಆನಂದ ಹಾಗೂ ಶ್ರಿಮತಿ ರಂಗಲಕ್ಷ್ಮಿಯವರ ಸುಪುತ್ರರಾಗಿ ಜನಿಸಿದರು. ಅವರ ಬ್ರಹ್ಮಜ್ಞಾನವು ಫೆಬ್ರವರಿ ೧೩,೨೦೧೬ ರಂದು ಪ್ರಕಟಗೊಂಡಿತು. ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳಿಗೆ ಸಾಯಿಬಾಬ ಶ್ರೀಧರಸ್ವಾಮಿಗಳ ಹಾಗೂ ಸಖರಾಯಪಟ್ಟಣದ ಶ್ರೀ ವೇಂಕಟಾಚಲ ಅವಧೂತರ ಆತ್ಮಾನುಗ್ರಹವಾಗಿದೆ. ಹೀಗೆ ಅವಧೂತಪರಂಪರೆಯ ಮತ್ತೊಂದು ದೀಪ್ತಿಯು ಲೋಕೋಪಕಾರಕಕ್ಕಾಗಿ ಪ್ರಕಟಗೊಂಡು ಭಕ್ತರನ್ನು ಧರ್ಮಿಷ್ಠರನ್ನಾಗಿ ಮಾಡಲು ಕಂಕಣಬದ್ಧವಾಗಿದೆ. ಪಂಚಭೂತಗಳೇ ಅವಧೂತರ ಹಿಡಿತದಲ್ಲಿರುತ್ತದೆ.

“ಅನ್ಯಥಾ ಶರಣಂ ನಾಸ್ತಿ ಗುರುರೇವ ಗತಿರ್ಮಮ” ಎಂಬ ಭಾವನೆಯಿದ್ದಲ್ಲಿ ಗುರುವು ಲಭಿಸುತ್ತಾನೆ.

ಸಂತ ಕಬೀರರು ಹೇಳುತ್ತಾರೆ. “ಏಕ್‌ ಶಬ್ದ್‌ ಗುರುದೇವ ಕಾ ತಾಕಾ ಅನಂತ ವಿಚಾರ ।ಥಕೆ ಮುನಿ ಜನ ಪಂಡಿತಾ, ವೇದ ನ ಪಾವೇ ಪಾರ್‌”

ಅವಧೂತ ಸದ್ಗುರುವಿನ ಒಂದೊಂದು ಪದದಲ್ಲಿಯೂ ಅನನ್ತ ಅರ್ಥವಿರುತ್ತದೆ. ಆ ಪದಗಳ ಅರ್ಥ ಭಕ್ತನಿಗಲ್ಲದೇ ಇನ್ಯಾವ ಮುನಿಗಳಿಗೂ, ಪಂಡಿತರಿಗೂ ಅರ್ಥವಾಗದು. ವೇದಗಳೂ ಕೂಡಾ ಅವರ ಪದದ ಆಳವನ್ನು ಕಂಡುಹಿಡಿಯಲಾರವು.

ಗುರುವು ಪವಾಡಪುರುಷರೆಂಬ ಭಾವನೆ ಸಲ್ಲದು. ಸಂಕಟಬಂದಾಗ ವೆಂಕಟರಮಣ ಎಂಬಂತೆ ಸಮಸ್ಯೆಪರಿಹಾರಕ್ಕೆ ಮಾತ್ರಾ ಗುರುವನ್ನು ಸ್ಮರಿಸಬಾರದು. ದುರ್ಲಭವಾದ ಮನುಷ್ಯಜನ್ಮದ ಸಾರ್ಥಕತೆಗಾಗಿ ಆತ್ಮಜ್ಞಾನದ ಅರಿವಿಗಾಗಿ ಅವಧೂತ ಗುರುವನ್ನು ಸ್ಮರಿಸಬೇಕು. ವ್ಯಕ್ತಿಮಟ್ಟದಿಂದ ಸಮಷ್ಟಿಯ ಮಟ್ಟದಲ್ಲಿ ಸರ್ವರಿಗೂ ಒಳಿತನ್ನು ಮಾಡುವ ಗುರುವಿಗೆ ನಿಷ್ಕಲ್ಮಶದಿಂದ ಮಾಡಿದ ಪ್ರಾರ್ಥನೆ ಮುಟ್ಟುವುದು.ಎಲ್ಲೇ ಇದ್ದರೂ ಹೇಗೇ ಇದ್ದರೂ ಒಮ್ಮನದಿಂದ ಮಾಡಿದ ನಮನ ಗುರುವಿಗೆ ತಲುಪಿ ಅವರು ಹೇಗೋ ಯಾರ ಮೂಲಕವಾಗಿಯೋ ಪರಿಹಾರ ಸಿಗುತ್ತದೆ.

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರು ಕೀ ಜೈ.

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಎಲ್ಲರಂತೆ ಸಾಧಾರಣವಾಗಿ ಬೆಳೆದರು. ಮೃದುಹೃದಯಿ, ಹಸನ್ಮುಖಿ ಅವರು. ಯಾರನ್ನೂ ನೋಯಿಸುತ್ತಿರಲಿಲ್ಲ. ಆದರೆ ಅವರೊಳಗಿನ ಗುರುಭಾವವನ್ನು, ಅಂತಃಶಕ್ತಿಯನ್ನು ಪ್ರಕಟಮಾಡಲಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲವೇ, ಸಸಿಯಾಗಿ ಮರವಾಗಿ ಹಣ್ಣು ಹೂವಾದಿಗಳನ್ನು ಬಿಡುವುದಲ್ಲವೇ, ಯೋಗ್ಯವಾದ ಸಮಯಕ್ಕೆ ಮರಗಳು ಫಲಕೊಡುವುದು ಅಲ್ಲವೇ.

ಹಾಗೆಯೇ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಗುರುರೂಪವಾಗಿ ಪ್ರಕಟವಾಗಲು ದಿನ ಸಮಯ ಮುಹೂರ್ತ ಪೂರ್ವ ನಿರ್ಧರಿತವಾಗಿತ್ತು. ಮೊದಲಿನಿಂದಲೂ ಗುರುಗಳ ಅಮ್ಮ ಶ್ರೀಮತಿ ರಂಗಲಕ್ಷ್ಮಿಯವರು ದತ್ತನ ಭಕ್ತೆಯಾಗಿದ್ದರು. ಗುರುಚರಿತ್ರೆ ಪಾರಾಯಣ ಮಾಡುತ್ತ ಇದ್ದರು. ಇವರ ಮನೆಯಲ್ಲಿ ಪ್ರತಿ ಗುರುವಾರ ಸಾಯಿಬಾಬಾರ ಆರತಿ, ಪೂಜೆ ಪ್ರಸಾದವಿನಿಯೋಗ ಭಕ್ತಿಭಾವದಿಂದ ನಡೆಯುತ್ತಾ ಬಂದಿದ್ದವು. ಗುರುನಿವಾಸದ ಸಕಲ ಗುರುವರ್ಯರ ಪ್ರತಿಮೆಗಳಿಗೆ ಹಾಗೂ ಭಾವಚಿತ್ರಗಳಿಗೆ ವಿವಿಧ ಹೂಗಳಿಂದ ಭವ್ಯವಾಗಿ ಅಲಂಕಾರ ಮಾಡುತ್ತಿದ್ದರು. ಗುರುಭಜನೆಯು ಭಕ್ತಿಭಾವದಿಂದ ನೆರವೇರುತ್ತಿತ್ತು. ಅಲೌಕಿಕ ಕಾಂತಿಯನ್ನು ನೋಡುವುದೇ ಒಂದು ಸೌಭಾಗ್ಯ. ನಂತರ ಗುರುಗಳ ದರ್ಶನ. ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳ ದರ್ಶನ ಮಾಡಿ ಪ್ರಸಾದವನ್ನು ಸ್ವೀಕರಿಸಿ ಭಕ್ತರು ಹೊರಡುತ್ತಿದ್ದರು. ಇದು ಪ್ರತಿ ಗುರುವಾರವೂ ವ್ರತದಂತೆ ನಡೆದುಬಂದಿತ್ತು.

ಅಂದು ಭಕ್ತರ ಪಾಲಿನ ಪುಣ್ಯಕರವಾದ ದಿನ. ಸಾಧಕರ ಬಾಳಿನ ಅಮೃತಮಯವಾದ ದಿನ. ಸದ್ಗುರುವಿಗಾಗಿ ಕಾಯುತ್ತ ಇದ್ದಂತಹ ಮುಮುಕ್ಷುಗಳಿಗೆ ತಮ್ಮ ಇಷ್ಟು ದಿನದ ಪ್ರತೀಕ್ಷೆಯ ಫಲ ದೊರಕಿದ ದಿನ. ಅಂದು February 13, 2016. ಆ ರಾತ್ರಿ, ಗುರುಗಳು ಮಲಗಿದ್ದಾಗ ಶ್ರೋತ್ರಿಯ ಬ್ರಾಹ್ಮಣರು ವೇದಘೋಷ ಮಾಡಿದರು. ಮೂರು ಜನ ಗುರುಗಳು ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳಿಗೆ ಹರಸಿ ಹೂವು ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು. ಅರ್ಜುನರು ಬೆಳಗ್ಗೆ ಎದ್ದು ನೋಡಿದಾಗ ಹಾಸಿಗೆಯ ಮೇಲೆ ಹೂವು ಮಂತ್ರಾಕ್ಷತೆ ಬಿದ್ದಿತ್ತು. ಅರ್ಜುನರಿಗೆ ಹಾಗೂ ಅವರ ತಾಯಿಯರಿಗೆ ಈ ಘಟನೆ ತುಂಬಾ ಆಶ್ಚರ್ಯ ತಂದಿತು. ಅವರ ಅಮ್ಮ ಆ ಹೂವು ಮಂತ್ರಾಕ್ಷತೆಯನ್ನು ಭಕ್ತಿಯಿಂದ ಜತನವಾಗಿ ತೆಗೆದಿಟ್ಟರು. ಅವತ್ತು ಅರ್ಜುನರಿಗೆ “ವ್ಯಕ್ತಿಯೊಬ್ಬ ಬರುತ್ತಾನೆ. ಅವನ ವಿಷಯವಾಗಿ ಹೇಳು” ಎಂದು. ಗುರುನಾಥರು ಅಂತರ್ವಾಣಿಯಾಗಿ ನುಡಿದರು. ಅದರಂತೆ ಓರ್ವ ವ್ಯಕ್ತಿ ಬಂದನು. ಅರ್ಜುನರು ಗುರುವಿನ ಅಣತಿಯಿಂದ ಆ ವ್ಯಕ್ತಿಯ ಪೂರ್ವಾಪರಗಳನ್ನೆಲ್ಲಾ ಹೇಳಿದರು. ಇದನ್ನು ಕಂಡು ಎಲ್ಲರಿಗೂ ಅಚ್ಚರಿಯೋ ಅಚ್ಚರಿ.

arjun-guruji

ಹೀಗೆ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳ ಅಂತರಾತ್ಮದಲ್ಲಿ ಪ್ರಕಾಶಮಯವಾದ ಜ್ಞಾನವೆಂಬ ಜ್ಯೊತಿಯು ಉರಿಯುತ್ತಿದ್ದರೂ ಬೂದಿ ಮುಚ್ಚಿದ ಕೆಂಡದಂತೆ, ಕಪ್ಪೆಚಿಪ್ಪಿನಲ್ಲಿರುವ ಮುತ್ತಿನಂತೆ ಅವರ ಪಾಡಿಗೆ ಅವರಿದ್ದರು. ಅವರ ಅಂತರಂಗದಲ್ಲಿ ತುಡಿಯುತ್ತಿದ್ದ ಭಕ್ತರ ಉದ್ಧಾರ, ಧರ್ಮಸ್ಥಾಪನೆಯ ಗುರಿಗೇ ಈ ಘಟನೆಯೇ ನಾಂದಿಯಾಯಿತು.

ನಂತರದ ದಿನಗಳಲ್ಲಿ ಜನರ ಭೇಟಿ, ಅವರ ಕಷ್ಟಸುಖಗಳ ವಿನಿಮಯ, ದುಃಖದುಮ್ಮಾನಗಳಿಗೆ ಜನಸಾಗರವೇ ಹರಿದು ಬರುತ್ತಿತ್ತು. ಜಾತಕ ಬೇಡ, ಕುಂಡಲಿ ಬೇಡ, ಆ ಪುಣ್ಯಮೂರ್ತಿಯ ದೃಷ್ಟಿ ಯಾರ ಮೇಲೆ ಬೀಳುವುದೋ ಅವರ ಜೀವನವೇ ಪಾವನ. ಅದೆಷ್ಟು ಜನರ ಬಾಳಿಗೆ ಬೆಳಕಾಗಿದಾರೋ, ಅದೆಷ್ಟು ಜನರ ಪ್ರಾತಃಸ್ಮರಣೀಯರಾಗಿದ್ದಾರೋ, ಅದೆಷ್ಟು ಜನರ ಕಷ್ಟ ನಿವಾರಣೆಯಾಗಿದೆಯೂ, ಅದೆಷ್ಟು ಜನರಿಗೆ ಬದುಕಲಿ ಆಶಾಕಿರಣ ಮೂಡಿದೆಯೂ ಆ ಭಗವಂತನೇ ಬಲ್ಲ.

ಕಸ್ತೂರಿಯನ್ನು ಡಬ್ಬದಲ್ಲಿ ಇಟ್ಟರೆ ಪರಿಮಳವ ಸೂಸದೆ ಇರುವುದೇ, ಸುಗಂಧವಿರುವ ಹೂಗಳು ಇರುವೆಡೆ. ಪಾತರಗಿತ್ತಿಯರು, ಮಕರಂದವಿರುವೆಡೆ ಜೇನ್ನೊಣಗಳು ಬರುವಂತೆ ದೂರದೂರದ ಊರಿನಿಂದ ಭಕ್ತರು ಬರತೊಡಗಿದರು. ಕರುಣಾಮಯಿ ವಾತ್ಸಲ್ಯಮಯಿಯಾದ ಗುರುಗಳ ಅಮ್ಮನವರು ಮನೆಗೆ ಬಂದವರನ್ನು ಆದರದಿಂದ ಕಂಡು, ಗುರುಗಳ ದರ್ಶನಕ್ಕೆ, ಸಂವಾದಕ್ಕೆ ಅನುಕೂಲ ಮಾಡಿಕೊಡುತ್ತಿದ್ದರು. ಬಂದವರಿಗೆ ಕಾಫಿ ವ್ಯವಸ್ಥೆ, ಹೊರಡುವಾಗ ಬಾಳೆಹಣ್ಣು ಬಿಸ್ಕತ್‌ ಕೊಡುತ್ತಿದ್ದರು. ಸಿರಿವಂತ ಬರಲಿ, ಬಡವನೇ ಬರಲಿ ಅವರ ಸೇವೆಗಾಗಲೀ ಗುರುಗಳ ಭೇಟಿಗಾಗಲೀ ಏನೂ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ಅನೇಕವೇಳೆ ಅವರ ಊಟ ತಿಂಡಿ ನಿದ್ರೆಗಳು ಸರಿಯಾದ ಸಮಯಕ್ಕೆ ಆಗುತ್ತಿರಲಿಲ್ಲ. ಆದರೂ ಆ ಮಾತೆಯವರ ಕಂಗಳಲ್ಲಿ ಮುಖದಲ್ಲಿ ಒಂದಿನಿತೂ ಭಕ್ತರ ಮೆಲೆ ಬೇಸರವು ಮೂಡುತ್ತಿರಲಿಲ್ಲ. ಅಂತಹ ದೇವತಾಮೂರ್ತಿ, ಮೇರುವ್ಯಕ್ತಿತ್ವದ ತಾಯಿಯ ಸಂಸ್ಕಾರ, ಸ್ವಭಾವಗಳು ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳಿಗೆ ಜನ್ಮದತ್ತವಾಗಿಯೇ ಬಂದಿತೆಂಬುದೆಂದೇ ಹೇಳಬಹುದು. ಇತ್ತ ಗುರುಗಳೂ ಸಹ ತಮ್ಮ ನಿದ್ರಾಹಾರ ವಿಶ್ರಾಂತಿಯನ್ನು ಪರಿಗಣನೆ ಮಾಡದೆ. ಬಂದಂತಹ ಭಕ್ತರ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸುತ್ತಿದ್ದರು.

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ದೃಷ್ಟಿಸಿ ನೋಡಿದರೆ ಒಂದು ವಿಶೇಷ. ಅವರು ಮಾತನಾಡಿಸಿದರೇ ಮತ್ತೇನೋ ವಿಶೇಷದ ಸೂಚನೆ, ಅವರು ಮೆಲುನಗೆಯಿಂದ ವೀಕ್ಷಿಸಿದರೆ ಏನೋ ಸೂಚನೆ. ಒಬ್ಬರನ್ನು ನೋಡುತ್ತಾ ಒಂದು ವಿಷಯವನ್ನು ಹೇಳಿ ಮತ್ತೊಬ್ಬರನ್ನು ನೋಡಿದರೆ ಆ ವಿಷಯ ಅವರಿಗೂ ಅನ್ವಯವಾಗುತ್ತಿತ್ತು.

ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳ ಮುಂದೆ ಕುಳಿತುಕೊಳ್ಳುವುದೇ ಒಂದು. ಸೌಭಾಗ್ಯ. ಆ ಮಂದಸ್ಮಿತ ನಗು, ಕಾರುಣ್ಯಪೂರಿತ ನೋಟಗಳು, ಮೃದು ಮಧುರ ಮಾತುಗಳು ಎಲ್ಲರಲ್ಲೂ ಭಕ್ತಿಭಾವ ಮೂಡಿಸುತ್ತಿತ್ತು. ಕೆಲವು ಭಕ್ತರಿಗೆ ಮೊದಲನೇ ಭೇಟಿಯಲ್ಲೇ ಅವರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಕೆಲವರು ಅನೇಕ ಬಾರಿ ಹೋದ ಮೇಲೆ ಅವರ ದರ್ಶನದ ಸಂವಾದದ ಭಾಗ್ಯವು ಒದಗುತ್ತಿತ್ತು. ಗುರುವಿನ ಕರುಣೆಯಿಂದ ಅವರ ಕರ್ಮಗಳು ಕ್ಷಯಿಸುತ್ತಾ, ಪಾಪಗಳು ಕಳೆಯುತ್ತಾ ಅವರಿಗೆ ಗುರುವಿನ ಅನುಗ್ರಹವಾಗುತ್ತದೆ. ಅವರು ಬಂದಂತಹ ಭಕ್ತರಲ್ಲಿನ ದುರ್ಗುಣಗಳನ್ನು ಯಾವುದೋ ಘಟನೆಗಳ ಮೂಲಕ ಅವರಿಗೆ ಮಾತ್ರ ಗೊತ್ತಾಗುವ ಹಾಗೆ ತಿಳಿಸುವ ರೀತಿ ಅತ್ಯಮೋಘವಾದದು. ಆ ಗುಣವನ್ನು ಹೊಂದಿರುವ ವ್ಯಕ್ತಿಗೆ ಅರಿವಾಗಿ ಆ ದುರ್ಗುಣಗಳನ್ನು ತ್ಯಜಿಸುವ ನಿರ್ಧಾರ ಮಾಡಿಬಿಡುತ್ತಾನೆ.

ನಗುನಗುತ್ತಲೇ ಬಂದ ಭಕ್ತರ ಕ್ಲೇಶನಿವಾರಣೆ ಮಾಡುವ ಇವರಿಗೆ ಕೋಪ ಬರುವುದು ತುಂಬಾ ಅಪರೂಪ. ಆದರೆ ಕೋಪಬಂದ ಅವರನ್ನು ನೋಡಿದಾಗ ದಿಗ್ಭಮೆಯಾಗುತ್ತಿತ್ತು. ಅದೆಲ್ಲ ಕ್ಷಣಕಾಲವಷ್ಟೇ. ಮತ್ತೆ ಆ ವ್ಯಕ್ತಿಯನ್ನು ಕರೆದು ಸಮಾಧಾನದ ಮಾತುಗಳನ್ನು ಆಡಿ ಕಳುಹಿಸುತ್ತಿದ್ದ ಅವರ ಈ ಪರಿ ಅಗಮ್ಯವಾದುದು.

ಗುರುನಾಥರ ಅನುಜ್ಞೆಯಂತೆ ಗುರುಗಳು ಫೆಬ್ರವರಿ 13, 2018 ರಿಂದ ಒಂದೂವರೆ ವರ್ಷದ ಕಠಿಣ ಅನುಷ್ಠಾನವನ್ನು ವ್ರತವನ್ನು ತೊಡಗಿದ್ದಾರೆ. ಗುರುಗಳು ಇದೆಲ್ಲಾ ಮಾಡುತ್ತಿರುವುದು ಭಕ್ತರ ಉದ್ದಾರಕ್ಕಾಗಿ, ಅವರನ್ನು ಸದ್ಭಕ್ತರನ್ನಾಗಿ ಮಾಡುವುದಕ್ಕಾಗಿ ಇದಕ್ಕಾಗಿಯೇ ಕರಿಣ ನಿಯಮಗಳಿವೆ. ಗಾಣಿಗಾಪುರದಲ್ಲಿ ಮೊದಲು ದತ್ತನ ಸೇವೆ ಮಾಡಿ ಅವನ ಅನುಜ್ಞೆಯನ್ನು ಪಡೆದು ಪ್ರಾರಂಭ ಮಾಡಿದ್ದಾರೆ. ತ್ರಿಕಾಲ ಸ್ನಾನ ಜಪ ಧ್ಯಾನಗಳನ್ನು ಮಾಡುತ್ತಿದ್ದಾರೆ. ಭಕ್ತಿಯಿಂದ ಜಗನ್ಮಾತೆಯನ್ನು ಪೂಜಿಸುತ್ತಿದ್ದಾರೆ. ಪ್ರಖರವಾದ ಸೂರ್ಯನ ತಾಪಕ್ಕೆ ಕುಂದುವ ಕುಸುಮದ ಹಾಗೆ ಕಠಿಣ ಅನುಷ್ಠಾನದ ನಿಯಮಗಳಿಂದ ಗುರುಗಳ ದೇಹವು ಬಾಡುತ್ತಿದ್ದರೂ ಅವರೊಳಗಿನ ಆತ್ಮಜ್ಯೋತಿಯು ಪ್ರಕಾಶವಾಗಿ ಹೊಳೆಯುತ್ತಿತ್ತು.

ಆತ್ಮಜ್ಞಾನಿಗಳಿಗೆ ದೇಹದ ಬಾಧೆಯಾಗಲೀ ಪ್ರಾಪಂಚಿಕ ಸುಖದುಃಖಗಳಾಗಲೀ ಬಾಧಿಸದು. ಅವರ ಅದಮ್ಯ ಚೇತನಕ್ಕೆ ಕುಂದೆಂದೂ ಬಾರದು. ಈಗ ಸಧ್ಯಕ್ಕೆ ಮೊದಲನೆಯ ಹಂತದ ಅನುಷ್ಠಾನವು ಸಂಪನ್ನವಾಗಿದೆ. ಎರಡನೆಯ ಹಂತಕ್ಕೆ ಸಿದ್ಧತೆ ನಡೆಯುತ್ತಿದೆ. ಶೃಂಗೇರಿ, ಸಖರಾಯಪಟ್ಟಣದಲ್ಲಿ ಸೇವೆ ಸಲ್ಲಿಸಿ, ಮನೆದೇವರಿಗೆ ಸೇವೆ ಸಲ್ಲಿಸಿ, ಗುರು ಚರಿತ್ರೆ ಸಪ್ತಾಹ ಮಾಡಿ, ಶ್ರೀಧರಾಶ್ರಮದಲ್ಲಿ ಶ್ರೀಧರರ ಆಶೀರ್ವಾದವನ್ನು ಪಡೆದು ನಲವತ್ತೆಂಟು ದಿನದ ಎರಡನೆ ಹಂತದ ಅನುಷ್ಠಾನವನ್ನು ಕೈಗೊಳ್ಳುವರು. ಅನುಷ್ಠಾನದ ಸಮಯದಲ್ಲಿ ಪ್ರತಿ ಶುಕ್ರವಾರ ನವಾವರಣ ಪೂಜೆ, ಸೋಮವಾರ ಈಶ್ವರನಿಗೆ ರುದ್ರಾಭಿಷೇಕ, ನಿತ್ಯ ವಿಷ್ಣುಸಹಸ್ರನಾಮ ಪಾರಾಯಣ, ಗುರುವಾರದ ಆರತಿ, ಹೀಗೆ ಭಕ್ತಜನರ ಒಳಿತಿಗಾಗಿಯೇ ಈ ಕೈಂಕರ್ಯವನ್ನು ಕೈಗೊಂಡಿರುವ ಕರುಣಾಮೂರ್ತಿಯ ಕರುಣೆಯ ಪರಿಯನ್ನು ವರ್ಣಿಸಲು ಅಸಾಧ್ಯ.

ಭಕ್ತರು ಮನೆಯಿಂದ ಗುರುಗಳ ದರ್ಶನಕ್ಕೆ ಹೊರಡುವುದೂ ಅವರ ಇಚ್ಛೆಯಿಂದ ಮಾತ್ರವೇ. ದೀಪದ ಕೆಳಗೆ ಕತ್ತಲೆ ಎಂಬಂತೆ ಅವರ ಸಮೀಪವಿರುವ ಎಷ್ಟೋ ಜನರಿಗೆ ಅವರ ಮಹಿಮೆ ತಿಳಿಯುತ್ತಲೇ ಇರಲಿಲ್ಲ. “ಅತಿಪರಿಚಯಾತ್‌ ಮೂಢಾಃ ಅವಜ್ಞಾ ಭವಂತಿ” ಅಂದರೆ ಅತಿಯಾದ ಪರಿಚಯದ ಕಾರಣದಿಂದ ಅಜ್ಞಾನಿಗಳಿಗೆ ಅವರ ಮಹಿಮೆ ತಿಳಿಯದೇ ಹೋಗುತ್ತದೆ.

ಹಳ್ಳದ ಕಡೆಗೆ ತಾನೇ ನೀರು ಹರಿಯುವುದು, ಹಾಗೇ ಪ್ರತಿಫಲಾಪೇಕ್ಷೆಯಿಲ್ಲದೆ ಭಕ್ತೊದ್ಧಾರಕ್ಕಾಗಿಯೇ ಇರುವ ಗುರುಗಳು ಅದರಲ್ಲೇ ಸಾರ್ಥಕತೆಯನ್ನು ಕಾಣುತ್ತಿದ್ದಾರೆ. ಅವರ ವೈಯುಕ್ತಿಕ ಸುಖದುಃಖಗಳು ಗೌಣವಾಗಿ ಪರಿಗಣಿಸಿ. ಆರ್ತಸಂಕಷ್ಟನಿವಾರಣೆ ಮಾಡುತ್ತಿದ್ದಾರೆ. ಇದಕ್ಕೆ ಅವರು ಕೆಲವೊಮ್ಮೆ ತಮ್ಮ ದೇಹಕ್ಕೆ ಶಿಕ್ಷೆ ಕೊಡುತ್ತಿದ್ದರು. ಕೆಲವೊಮ್ಮೆ ಬಾಬಾರಿಗೆ ಅಕ್ಷತೆ: ಹಾಕಿ ಪ್ರಾರ್ಥಿಸಿ ನೀರಲ್ಲಿ ದೀಪ ಉರಿಸುತ್ತಿದ್ದರು.

ಹೀಗೆ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ದುಃಖಿತರ ಸಮಸ್ಯೆಗಳನ್ನು ಪರಿಹರಿಸುತ್ತಾ, ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾ, ಮುಮುಕ್ಷುಗಳಿಗೆ ನಿಜಮನೆಗೆ ಹೋಗುವ ದಾರಿ ತೋರುತ್ತಾ, ಬದುಕಲ್ಲಿ ಹೇಗೆ ವರ್ತಿಸಬೇಕು ಹೇಗೆ ವರ್ತಿಸಬಾರದು ಎಂದು ಹೇಳುತ್ತಾ, ಗುರುವನ್ನು ಅಚಲವಾಗಿ ನಂಬಿ. ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಆಗಾಗ ಹೇಳಿ ಅಜ್ಞಾನದಲ್ಲಿರುವ ಭಕ್ತರನ್ನು ಎಚ್ಚರಿಸುತ್ತಿರುತ್ತಾರೆ.

ಈ ಘಟನೆಗಳೆಲ್ಲಾ ಸತ್ಯ ಸಂಗತಿ. ಭಕ್ತರ ಅನುಭವವೇದ್ಯವಾದುದು. ಯಾವುದೋ ರೀತಿಯಿಂದ ಗುರುಗಳು ಅವರನ್ನು ರಕ್ಷಿಸಿದುದು ಆಗಿದೆ. ಇದು ಯಾವ ಪವಾಡವಾಗಲೀ ವೈಭವೀಕರಣವಾಗಲೀ ಅಲ್ಲ. ಸಾಗರದಷ್ಟು ವಿಶಾಲವಾಗಿರುವ ಗುರುವರರ ಅದೆಷ್ಟೋ ಲೀಲೆಗಳು. ಅವುಗಳನ್ನು ಹೇಳಲು, ಕೇಳಲು, ತಿಳಿಯಲು ಈ ಜನ್ಮವು ಸಾಲದು. ನಾನು ಹೇಳಲು ಹೊರಟಿರುವುದು ಅದರಲ್ಲಿನ ಒಂದು ಕಣ ಮಾತ್ರಾ. ಸಾಧಾರಣಜನರಿಗೆ ಅಚಿಂತ್ಯವೂ, ಮನೋವ್ಯಾಪಾರಗಳಿಗೆ ಅಗಮ್ಯವೂ, ಸಾಧಕಜನರಿಗೆ ಅವೇದ್ಯವೂ ಆಗಿವೆ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳ ಮಹಿಮೆಗಳು. ಇಂತಹ ಅಲೌಕಿಕ ಮಹಿಮೆಯ ಶ್ರವಣ ಮಾಡಿ ಧನ್ಯರಾಗೋಣಾ.